ಕಕ್ಕೇರಿ : ಬೆಳಗಾಂವಿ ಜಿಲ್ಲೆ ಖಾನಾಪುರ ತಾಲ್ಲೂಕಿನ ಒಂದು ಗ್ರಾಮ. ಖಾನಾಪುರ- ಹಳ್ಯಾಳ ರಸ್ತೆಯಲ್ಲಿ ಖಾನಾಪುರಕ್ಕೆ 30ಕಿಮೀ ದೂರದಲ್ಲಿದೆ. ಇದು ವೀರಶೈವ ಶರಣನಾದ ಡೋಹರ ಕಕ್ಕಯ್ಯ ಚೆನ್ನಬಸವಣ್ಣನೊಂದಿಗೆ ಕಲ್ಯಾಣದಿಂದ ಉಳುವಿಗೆ ಹೋಗುವ ಮಾರ್ಗದಲ್ಲಿ ಕಳಚುರಿ ಸೈನ್ಯದೊಂದಿಗೆ ಹೋರಾಡಿ ವೀರಮರಣ ಹೊಂದಿದ ಸ್ಥಳವೆಂಬ ನಂಬಿಕೆ ಇದೆ. ಹೊಲಗಳ ಮಧ್ಯದಲ್ಲಿ ಡೋಹರ ಕಕ್ಕಯ್ಯನದು ಎನ್ನಲಾದ ಗದ್ದುಗೆಯಿದೆ. ಈ ಗುಡಿಗೆ ಒಂದು ಚಿಕ್ಕ ಗರ್ಭಗೃಹವಿದ್ದು ಇದರಲ್ಲಿ ಲಿಂಗಪುಜೆಯಲ್ಲಿ ನಿರತನಾದ ಕಕ್ಕಯ್ಯನ ಕಲ್ಲಿನ ಮೂರ್ತಿಯಿದೆ. ಇವನ ಗದ್ದುಗೆ ಬಳಿ ಪ್ರತಿವರ್ಷ ಶಿವರಾತ್ರಿಯಲ್ಲಿ ಮೂರು ದಿನಗಳವರೆಗೆ ಜಾತ್ರೆ ನಡೆಯುವುದು. ಈ ಗದ್ದುಗೆಯ ಸಮೀಪ ಇತ್ತೀಚೆಗೆ ನಿರ್ಮಿತವಾದ ಪ್ರe್ಞೆÆೕದಯ ಆಶ್ರಮ ಇದೆ. ಆಶ್ರಮದಲ್ಲಿ ವಿರಕ್ತ ಸನ್ಯಾಸಿನಿಯೊಬ್ಬರು ವಾಸವಾಗಿರುವರು. ಊರಲ್ಲಿ ವೀರಭದ್ರ, ಬಸವಣ್ಣ, ಮಾರವ್ವ ಮೂಕಮ್ಮ, ದುರಗವ್ವ ದೇವಾಲಯಗಳಿವೆ. ಅಡವಿ ಸಿದ್ಧೇಶ್ವರ ಎಂಬ ಮಠವಿದೆ. ಸುಮಾರು ಮೂರು ಶತಮಾನಗಳ ಹಿಂದೆ ನಿರ್ಮಿಸಲಾದ ಎರಡು ಹಳೆಯ ದೇವಾಲಯಗಳಲ್ಲಿ, ಒಂದನ್ನು ಸ್ಥಳೀಯರು ಬೀಸ್ಟದೇವಿ ದೇವಾಲಯವೆಂದು ಕರೆಯುವರು. ಅದು ಇಂಡೋ - ಸರಾಸೆನಿಕ್ ಶೈಲಿಯಲ್ಲಿದ್ದು, ಗುಮ್ಮಟವನ್ನು ಹೊಂದಿದೆ. ಈ ದೇವಿಯ ಜಾತ್ರೆ ವರ್ಷಕ್ಕೊಮ್ಮೆ 3 ದಿನಗಳವರೆಗೆ ನಡೆಯುತ್ತದೆ. ಈ ಊರಲ್ಲಿ ಸೇಂಟ್ ಅಂಥೊನಿ ಚರ್ಚ್ ಎಂದು ಕರೆಯಲಾಗುವ ಕೆಥೊಲಿಕ್ ಚರ್ಚ್ ಇದೆ.	(ಆರ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ